ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ತಾಳಮದ್ದಳೆಗಳು ಕಲಾತ್ಮಕತೆ ಕಳೆದುಕೊಳ್ಳುತ್ತಿವೆಯೇ?

ಲೇಖಕರು : ಯಕ್ಷಪ್ರಿಯ
ಗುರುವಾರ, ಜುಲೈ 17 , 2014

ಯಕ್ಷಗಾನ ಬಯಲಾಟಗಳಲ್ಲಿ ಕಲೆಯ ಸ್ವರೂಪ ನಷ್ಟವಾಗುತ್ತಿರುವ ಬಗ್ಗೆ ಚಿಂತೆ, ಕಾಳಜಿ, ಅಸಹನೆಗಳು ವ್ಯಕ್ತವಾಗುತ್ತಿರುವುದನ್ನು ಈ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಆದರೆ ಯಕ್ಷಗಾನ ತಾಳಮದ್ದಳೆಗಳಲ್ಲಿ ಕೂಡ ಅದರ ಕಲಾಸ್ವರೂಪ ನಷ್ಟಗೊಳ್ಳುತ್ತಿರುವ ಪ್ರಕ್ರಿಯೆ, ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಇಂದಿನ ತಾಳಮದ್ದಳೆಗಳು ಒಂದು ಕಲಾಕೃತಿಯಾಗಿ ಮೂಡಿಬರುವುದು ಬಹಳ ವಿರಳವಾಗಿದೆ. ಮಾತೇ ಪ್ರಧಾನವಾಗಿರುವ ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ಕೆಲವರಿಗೆ ಭಾಷಣ ಮಾಡಿದಂತೆ, ಟಿಪ್ಪಣಿ ಮಾಡಿದಂತೆ ಅತ್ಯಂತ ಸಲೀಸಾದ ಕ್ರಿಯೆ. ಭಾವಾಭಿವ್ಯಕ್ತಿ, ಸನ್ನಿವೇಶ ಚಿತ್ರಣ, ರಸಸೃಷ್ಟಿ ಇತ್ಯಾದಿಗಳ ಬಗ್ಗೆ ಗೊಡವೆಯೇ ಇಲ್ಲದೆ, "ವಾಕ್ಚಾತುರ್ಯ ಮೆರೆಯುವುದೇ ತಾಳಮದ್ದಳೆಯ ಉದ್ದೇಶ' ಎಂದು ಅನೇಕರು ಭಾವಿಸಿರುವಂತಿದೆ. ಆದರೆ ಈ ಆರೋಪ ಎಲ್ಲರ ಮೇಲಲ್ಲ. ವಾಕ್ಚಾತುರ್ಯ ಮೆರೆಯುತ್ತಲೂ, ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುತ್ತಲೂ, ರಸಭಾವಗಳನ್ನು ಅಭಿವ್ಯಕ್ತಿಸುವ ಪ್ರತಿಭಾಶಾಲಿ ಅರ್ಥಧಾರಿಗಳೂ ನಮ್ಮಲ್ಲಿ ಇದ್ದಾರೆ. ಆದರೆ ಅಂಥವರ ಸಂಖ್ಯೆ ತುಂಬಾ ಕಡಿಮೆ. ಮಾತಿಗೆ ಪ್ರತಿಮಾತು, ಚಮತ್ಕಾರಿಕ ನುಡಿಗಟ್ಟುಗಳು, ವಿನೋದಕರ ಟಿಪ್ಪಣಿಗಳು, ಕಟಕಿಗಳು, ಇದಿರು ಅರ್ಥಧಾರಿಯ ಹೆಸರು-ಜಾತಕಗಳನ್ನು ಎಳೆತರುವ ಪ್ರಯತ್ನಗಳು, ಸಮಕಾಲೀನ ರಾಜಕೀಯದ ಅಥವಾ ಇನ್ನಿತರ ವಿಚಾರಗಳನ್ನು ಉಲ್ಲೇಖೀಸುವ ಹಠ, ಇತ್ಯಾದಿ ತೆವಲುಗಳಿಂದಾಗಿ ತಾಳಮದ್ದಳೆ ತನ್ನ ಕಲಾತ್ಮಕತೆಯನ್ನು ಕಳೆದುಕೊಳ್ಳತೊಡಗಿದೆ.

ಕಲಾಶಿಲ್ಪಕ್ಕೆ ಬೆಲೆಯಿಲ್ಲ

ಸ್ವಲ್ಪ ಸಮಯದ ಹಿಂದೆ ನಾನು ಆಲಿಸಿದ ಒಂದೆರಡು ತಾಳಮದ್ದಳೆಗಳನ್ನು ಈ ಸಂದರ್ಭದಲ್ಲಿ ಉದಾಹರಿಸಬಹುದಾಗಿದೆ. ಪ್ರಸಂಗ: ಭರತಾಗಮನ. ಭರತನ ಪಾತ್ರ ವಹಿಸಿದ ಅರ್ಥಧಾರಿ ಅತ್ಯಂತ ಸಮರ್ಥವಾಗಿ ತನ್ನ ಪಾತ್ರ ಮತ್ತು ಸನ್ನಿವೇಶಗಳನ್ನು ಭಾವಪೂರ್ಣ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದರು. ಭರತನು ಅಯೋಧ್ಯೆಗೆ ಆಗಮಿಸುವಾಗ ಆತನ ಮನಸ್ಸಿನಲ್ಲಿ ಏಳುವ ಯೋಚನೆಗಳು, ಗೊಂದಲಗಳು; ಅರಮನೆ ಪ್ರವೇಶ ಮಾಡುವ ಮೊದಲು ಅವನು ಕಂಡ ದೃಶ್ಯಗಳು- ಎಲ್ಲವೂ ಅರ್ಥಧಾರಿಯ ಮಾತಿನಲ್ಲಿ ಅದೆಷ್ಟು ಸೊಗಸಾಗಿ ಚಿತ್ರಣಗೊಂಡಿತೆಂದರೆ, ಶ್ರೋತೃಗಳ ಕಣ್ಣ ಮುಂದೆ ಆ ದೃಶ್ಯಗಳೆಲ್ಲಾ ಹಾದು ಹೋಗುವಂತಹ ರೀತಿಯ ಪರಿಣಾಮವನ್ನುಂಟು ಮಾಡಿದ್ದುವು. ಎಲ್ಲ ಪ್ರೇಕ್ಷಕರು ಏಕಾಗ್ರತೆಯಿಂದ ಭರತ ಪಾತ್ರಧಾರಿಯ ಮಾತುಗಳನ್ನು ಆಲಿಸುತ್ತಿದ್ದರು ಮಾತ್ರವಲ್ಲ, ಭರತನ ಸ್ಥಿತಿಯನ್ನು ನೆನೆದು ತಲ್ಲಣಗೊಂಡಿದ್ದರು.

ಅಯೋಧ್ಯೆಗೆ ತನ್ನನ್ನು ಬರಹೇಳಲು ಕಾರಣವೇನು ಎಂದು ತಿಳಿಯದೆ ಹಪಹಪಿಸುತ್ತಿದ್ದ ಭರತನಿಗೆ ಎದುರಾಗಿ ಸಿಕ್ಕಿದವರು ಗುರು ವಸಿಷ್ಠರು. ಪುರಜನರೂ ಪರಿವಾರದವರೂ ಮಾತನಾಡದೆ ಮುಖ ತಿರುಗಿಸಿ ಭರತನನ್ನು ಮತ್ತಷ್ಟು ಅಧೀರಗೊಳಿಸಿದ ಸಂದರ್ಭದಲ್ಲಿ ಕಾಣಸಿಕ್ಕಿದ ಗುರುಗಳಲ್ಲಿ ಭರತ ವಿಷಯವೇನೆಂದು ಕೇಳುತ್ತಾನೆ. ಆಗ ಗುರು ವಸಿಷ್ಠರು ಆತನಿಗೆ ವಿಷಯ ತಿಳಿಸುವ ರೀತಿ ಮಾತ್ರ ಆಘಾತಕಾರಿಯಾಗಿತ್ತು. ಕೈಕೆ ವರ ಕೇಳಿದ್ದು, ರಾಮ ವನವಾಸಕ್ಕೆ ತೆರಳಿದ್ದು, ದಶರಥ ಮರಣಿಸಿದ್ದು ಇತ್ಯಾದಿಗಳನ್ನು ವಸಿಷ್ಠರು ಭರತನಲ್ಲಿ ಹೇಳುವಾಗ, ಯಾವುದೇ ರೀತಿಯ ಭಾವನೆಯನ್ನು ಹೊಂದಿರದ ಓರ್ವ ಯಂತ್ರ ಮನುಷ್ಯನಂತೆ ಕಂಡುಬಂದರು. ದೊಡ್ಡ ಬಸ್‌ ನಿಲ್ದಾಣವೊಂದರಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡುವ ಅಧಿಕಾರಿ ಅದೆಷ್ಟು ನಿರ್ಲಿಪ್ತತೆಯಿಂದ ಬಸ್ಸುಗಳು ಬರುವ ಹೋಗುವ ಮಾಹಿತಿ ನೀಡುತ್ತಾರೋ, ಹೆಚ್ಚು ಕಡಿಮೆ ಅದೇ ರೀತಿಯಲ್ಲಿ, ಭರತನಿಗೆ ಆತನ ಕುಟುಂಬದಲ್ಲಿ ನಡೆದ ಗಂಭೀರ ಘಟನೆಗಳ ಮಾಹಿತಿ ನೀಡುತ್ತಾರೆ. ತಂದೆ ತೀರಿಕೊಂಡದ್ದನ್ನು, ಅಣ್ಣ ಕಾಡಿಗೆ ತೆರಳಿದ್ದನ್ನು ಮೊದಲ ಬಾರಿಗೆ ಕೇಳುವಾಗ, ಭರತ ಅದನ್ನು ಹೇಗೆ ತಡೆದುಕೊಂಡಾನು ಎಂಬ ಯೋಚನೆಯೇ ವಸಿಷ್ಠನಿಗಿರಲಿಲ್ಲ. ಹೆಚ್ಚೇಕೆ, ದಶರಥನ ಮರಣ, ರಾಮನ ವನಗಮನಗಳಿಂದ ಸ್ವತಃ ವಸಿಷ್ಠನ ಮನಸ್ಸಿಗೂ ಯಾವುದೇ ಪರಿಣಾಮವಾಗಿಲ್ಲ ಎಂದು ಅಲ್ಲಿ ಭಾಸವಾಗುತ್ತಿತ್ತು. ಅನೇಕ ತಾಳಮದ್ದಳೆಗಳಲ್ಲಿ ಅದನ್ನು ಹೇಳಿ ಹೇಳಿ, ಭಾವನೆಗಳನ್ನು ಕಳಕೊಂಡವನಾಗಿದ್ದೇನೆ ನಾನು - ಎಂಬ ರೀತಿಯಲ್ಲಿತ್ತು ಅರ್ಥಧಾರಿಯ ಮಾತುಗಾರಿಕೆಯ ವಿಧಾನ.

ಭರತನ ಭಾವಪೂರ್ಣ ಮಾತುಗಳ ರಸಾಸ್ವಾದನೆ ಮಾಡುತ್ತಿದ್ದ ಶ್ರೋತೃಗಳಿಗೆ ವಸಿಷ್ಠರ ಮಾತುಗಾರಿಕೆಯ ರೀತಿ ತೀರ ಅಸಹನೀಯವಾಗಿತ್ತು. ಪಾತ್ರ ನಿರೂಪಣೆಯಲ್ಲಿ ಮೈಮರೆತಿದ್ದ ಭರತನ ಅರ್ಥಧಾರಿಗೂ ವಸಿಷ್ಠನ ಸಂವಾದ ವೈಖರಿ ನಿರಾಶೆ ತಂದಿದ್ದರೆ ಆಶ್ಚರ್ಯವಿಲ್ಲ. ಒಂದು ಸಂವಾದದ ಉದಾಹರಣೆ ಹೀಗಿದೆ. ಅಯೋಧ್ಯೆಯ ಅರಮನೆಗೆ ಆಗಮಿಸಿದ ಭರತನಿಗೆ ದಶರಥ ಕಾಣಸಿಗುವುದಿಲ್ಲ. ಅಯೋಧ್ಯೆಯಲ್ಲಿ ನಡೆದುದೇನೆಂದು ತಿಳಿಯದೆ ದುಃಖೀತನಾದ ಆತ ವಸಿಷ್ಠರಲ್ಲಿ ಹೇಳುತ್ತಾನೆ. "ಗುರುಗಳೇ, ನನ್ನ ತಂದೆಯವರೆಲ್ಲಿ? ನಾನು ಅವರಿದ್ದಲ್ಲಿಗೆ ಹೋಗಬೇಕು' ಅಂದಾಗ ವಸಿಷ್ಠ ಹೇಳುತ್ತಾನೆ, "ನಿನ್ನ ತಂದೆಯವರು ಇರುವಲ್ಲಿಗೆ ನಿನಗೆ ಹೋಗಲಿಕ್ಕಿದೆ, ಆದರೆ ಈಗಲ್ಲ, ಅದಕ್ಕೆ ತಡ ಉಂಟು.' ಭರತನ ತಲ್ಲಣವನ್ನು ತುಚ್ಛಿàಕರಿಸುವ, ದಶರಥನ ಸಾವನ್ನು ನಿಕೃಷ್ಟಗೊಳಿಸುವ ವಸಿಷ್ಠನ ಈ ಪ್ರತಿಕ್ರಿಯೆ, ತನ್ನ ವಾಕ್ಚಾತುರ್ಯವೆಂದು ಅರ್ಥಧಾರಿ ಭ್ರಮಿಸಬಹುದು. ಆದರೆ ವಾಸ್ತವದಲ್ಲಿ ಅದು ತಾಳಮದ್ದಳೆಯ ಕಲಾಶಿಲ್ಪವನ್ನು ಕೆಡವಿಹಾಕುವ ಒಂದು ಕ್ರಿಯೆಯಾಗುತ್ತದೆ.

ಇದೇ ತಾಳಮದ್ದಳೆಯಲ್ಲಿ ರಾಮನ ಪಾತ್ರ ವಹಿಸಿದ ಅರ್ಥಧಾರಿಯ ಮಾತುಗಾರಿಕೆಯ ಒಂದು ಮಾದರಿ ಹೀಗಿದೆ. ಕೈಕೆಯು ತನ್ನ ಕೃತ್ಯದಿಂದ ಪಶ್ಚಾತ್ತಾಪಗೊಂಡಿರುವ ಬಗ್ಗೆ ರಾಮನು ಭರತನಲ್ಲಿ ಹೇಳುವ ಸಂದರ್ಭ.

"ಯಾವುದೇ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಮ್ಮ ಸನಾತನ ಧರ್ಮದಲ್ಲಿ ಅವಕಾಶವಿದೆ. ಬೇರೆಯವರ ಧರ್ಮದಲ್ಲಿ ಕದ್ದವನ ಕೈ ಕಡಿಯಬೇಕೆಂಬ ನಿಯಮವಿದೆ; ಅಪರಾಧ ಮಾಡಿದವರನ್ನು ಕಲ್ಲು ಹೊಡೆದು ಸಾಯಿಸಬೇಕೆಂಬ ನೀತಿ ಅವರ ಧರ್ಮದಲ್ಲಿದೆ.' ರಾಮ ಹೇಳುವ ಈ ಅವರು ಯಾರು? ಆ ಧರ್ಮ ಯಾವುದು? ಅಂತಹದೊಂದು ಧರ್ಮ ತ್ರೇತಾಯುಗದಲ್ಲಿ ಇದ್ದುದರ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಯಾವುದೋ ಒಂದು ಗುಂಪಿಗೆ ಮಾತ್ರ ಇಷ್ಟವಾಗಬಹುದಾದಂತಹ ಇಂತಹ ಮಾತುಗಳು ಮರ್ಯಾದಾ ಪುರುಷೋತ್ತಮ ರಾಮನ ಬಾಯಿಯಿಂದ ಬರಬಹುದೇ?

ಇನ್ನೊಂದು ತಾಳಮದ್ದಳೆ. ಪ್ರಸಂಗ: ಭಕ್ತ ಮಯೂರಧ್ವಜ - ಹರಿಭಕ್ತನಾದ ಮಯೂರಧ್ವಜ, ಕೃಷ್ಣದರ್ಶನದ ಅವಕಾಶ ದೊರೆಯಲಿಲ್ಲವಲ್ಲ ಎಂದು ಬೇಸರಿಸುವ ಸಂದರ್ಭದಲ್ಲಿ, ಕೃಷ್ಣನು ಬ್ರಾಹ್ಮಣ ವೇಷದಲ್ಲಿ ಬಂದು, ಸಿಂಹವೊಂದು ಆತನ ಮಗನನ್ನು ಹಿಡಿದ ಕಥೆ, ಮಯೂರಧ್ವಜನ ದೇಹಾರ್ಧ ಕೇಳಿದ ವಿವರಗಳನ್ನೆಲ್ಲ ಹೇಳುತ್ತಾನೆ. ಆದರೆ ಈ ಬ್ರಾಹ್ಮಣ ಮಾತನಾಡುವ ರೀತಿಯೇ ವಿಚಿತ್ರವಾಗಿದೆ. ಸಾವಿನ ದವಡೆಯಲ್ಲಿರುವ ತನ್ನ ಮಗನ ಉಳಿವಿಗಾಗಿ ಹಂಬಲಿಸುವ ಭಾವ ಬ್ರಾಹ್ಮಣನ ಮಾತುಗಳಲ್ಲಿ ಪ್ರಕಟವಾಗಬೇಡವೇ? ರಾಜನಲ್ಲಿ ತನ್ನ ಕಷ್ಟವನ್ನು ಹೇಳಿಕೊಳ್ಳುವಾಗ ತಾನು ಹೇಳುವುದು ನಿಜವೆಂಬಂತೆ ಕಾತರ ದುಃಖಗಳಿಂದ ಕೂಡಿದ ಮಾತು ಅಲ್ಲಿ ಬರಬೇಡವೇ? ಅದನ್ನು ಬಿಟ್ಟು ವ್ಯಾಪಾರದಲ್ಲಿ ಚೌಕಾಶಿ ಮಾಡುವವರಂತೆ, "ಬೇಡ, ಅದು ಆಗಲಿಕ್ಕಿಲ್ಲ, ಆಗುವ ಹೋಗುವ ಸಂಗತಿಯಲ್ಲ' ಎಂದು ಒಂದು ರೀತಿಯಲ್ಲಿ ರಂಜನೆ ಹುಟ್ಟಿಸುವಂತಹ ಮಾತುಗಳಲ್ಲಿ ಅಭಿನಯಿಸುವುದು ಎಷ್ಟು ಸರಿ? ಅದು ಬ್ರಾಹ್ಮಣ ವೇಷಧಾರಿ, ನಿಜ ಬ್ರಾಹ್ಮಣ ಅಲ್ಲ ಎಂದು ಮತ್ತೆ ಮತ್ತೆ ಸಭಿಕರಿಗೆ ಮನದಟ್ಟು ಮಾಡುವ ಪ್ರಯತ್ನವೇ? ಸಭಿಕರಿಗಂತೂ ಅದು ತಿಳಿದೇ ಇದೆ. ಆದರೆ ಮಯೂರಧ್ವಜನ ಮುಂದೆ ಮಗನನ್ನು ಕಳಕೊಳ್ಳಬೇಕಾದ ಇಕ್ಕಟ್ಟಿನ ಸ್ಥಿತಿಯಲ್ಲಿದ್ದ ಬ್ರಾಹ್ಮಣನಾಗಿಯೇ ಮಾತನಾಡಬೇಡವೇ? ಚಮತ್ಕಾರಿಕ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಿದರೆ ತಾಳಮದ್ದಳೆ ಯಶಸ್ವಿಯಾಗುವುದೇ?

ಪಾತ್ರವಾಗಿ ಅರ್ಥವೆ? ಪಾತ್ರದ ಪರವಾಗಿ ಅರ್ಥವೆ?

ಚಮತ್ಕಾರದ ನುಡಿಗಳನ್ನಾಡಿ ಅರ್ಥಧಾರಿಗಳು ತಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡಬಹುದು; ಪ್ರೇಕ್ಷಕರನ್ನು ರಂಜಿಸಬಹುದು. ಆದರೆ ತಾಳಮದ್ದಳೆಯಲ್ಲಿ ಎಲ್ಲ ಪಾತ್ರಗಳಿಗೂ ಅದನ್ನೇ ಮಾಡಿದರೆ ಹೇಗೆ? ಗಂಭೀರವಾದ ಪಾತ್ರ, ಗಂಭೀರವಾದ ಸನ್ನಿವೇಶಗಳಲ್ಲಿ ಕೂಡ ರಂಜನೆ ನೀಡುವ ಹಠದಿಂದ ತಾಳಮದ್ದಳೆಯನ್ನು ಕೆಡಿಸುವುದೇಕೆ? ಇತ್ತೀಚೆಗಿನ ತಾಳಮದ್ದಳೆಗಳಲ್ಲಿ ಕಂಡುಬರುವುದೇನೆಂದರೆ, ಅರ್ಥಧಾರಿಗಳು ಪಾತ್ರ ವಹಿಸಿ ಅರ್ಥ ಹೇಳುವ ಬದಲು, ಪಾತ್ರದ ಪರವಾಗಿ ಅರ್ಥ ಹೇಳುವ ಪರಿಪಾಠ ಬೆಳೆಸಿಕೊಂಡಿರುವುದು. ಪಾತ್ರದ ಪರವಾಗಿ ಅರ್ಥ ಹೇಳುವಾಗ ಅಲ್ಲಿ ಅರ್ಥಧಾರಿ ಕಾಣಿಸಿಕೊಳ್ಳುತ್ತಾನೆಯೇ ವಿನಾ ಪಾತ್ರ ಕಾಣಿಸಿಕೊಳ್ಳುವುದಿಲ್ಲ. ಒಂದಷ್ಟು ಪ್ರಸಂಗಗಳನ್ನು ಕಲಿತುಕೊಂಡು, ಆಕರ ಗ್ರಂಥಗಳಿಂದ ಆವಶ್ಯಕ ಮಾಹಿತಿ ಸಂಗ್ರಹಿಸಿಟ್ಟುಕೊಂಡರೆ, ಅರ್ಥ ಹೇಳುವುದು "ಈಗಿನ ವಿನ್ಯಾಸದಲ್ಲಿ' ಕಷ್ಟವೇನಲ್ಲ. ಸಾಮಾನ್ಯವಾಗಿ ಸಂವಾದ ಇಂತಹದೇ ದಾರಿಯಲ್ಲಿ ಹೋಗುವುದು ಎಂಬುದನ್ನು ರೂಢಿಯಿಂದ ಕಲಿತುಕೊಂಡ ಬಳಿಕ, ಅರ್ಥ ಹೇಳುವುದು ಒಂದು ಸಲೀಸಾದ ಕೆಲಸವಾಗುತ್ತದೆ. ಕೆಲವು ಗಂಟೆಗಳ ಹಾಡು, ಹಿಮ್ಮೇಳ, ಅರ್ಥಗಳಲ್ಲಿ ಒಂದು ತಾಳಮದ್ದಳೆಯನ್ನು ಮಾಡಿ ಮುಗಿಸುವುದು ಕಷ್ಟಕರ ಕೆಲಸವೇನಲ್ಲ.

ಆದರೆ ತಾಳಮದ್ದಳೆ ಒಂದು ಕಲಾಸೃಷ್ಟಿಯಾಗಬೇಕಾದರೆ, ಪ್ರಸಂಗ ಪಾತ್ರಗಳನ್ನು ಚೆನ್ನಾಗಿ ಮನವರಿಕೆ ಮಾಡಿಕೊಂಡು ಅದರ ಚಿತ್ರಣ ಮಾಡಬೇಕಾಗುತ್ತದೆ. ಮಾತುಗಳು, ಮಾತಾಡುವ ಶೈಲಿ, ಶ್ರುತಿ, ಭಾವ ಪ್ರಕಟನೆಗಳಿಗೆ ಮಹತ್ವ ನೀಡಬೇಕಾಗುತ್ತದೆ. ಹಾಗೆ ಮಾಡಲು ಶ್ರಮ ಪಡಬೇಕಾಗುತ್ತದೆ. ಮನಸ್ಸು ಸೃಜನಶೀಲವಾಗಿ ಯೋಚಿಸಬೇಕಾಗುತ್ತದೆ. ವೈಯಕ್ತಿಕ ಹಿತಾಸಕ್ತಿ, ತೆವಲುಗಳನ್ನು ಬಿಟ್ಟು, ಕಲಾ ಪ್ರದರ್ಶನದ ಯಶಸ್ಸಿನ ಕಡೆಗೆ ದೃಷ್ಟಿಯಿಡಬೇಕಾಗುತ್ತದೆ. ಮೆಚ್ಚುಗೆಯ ಮಾತುಗಳಿಗೆ ಹಾತೊರೆಯುವ ಬದಲು ವಿಮರ್ಶೆಯ ನುಡಿಗಳಿಗೆ ಕಿವಿ ತೆರೆದಿಡಬೇಕಾಗುತ್ತದೆ. ಸ್ವ-ವಿಮರ್ಶೆ ಮಾಡುವುದರಿಂದಲೂ ಕೆಲವೊಮ್ಮೆ ಪ್ರಯೋಜನವಾಗಬಹುದು.





ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ